ಗೋಂಡ್ವಾನ-
	ಮಧ್ಯಭಾರತದಲ್ಲಿ ದ್ರಾವಿಡ ಬುಡಕಟ್ಟಿನ ಗೋಂಡ ಜನಾಂಗ ನೆಲೆಸಿದ್ದ ನಾಡು. ತೆಲುಗಿನ ಕೊಂಡ (ಬೆಟ್ಟ) ಎಂಬ ಶಬ್ದದಿಂದ ಗೋಂಡ ಬಂದಿದೆಯೆಂದು ಹೇಳಲಾಗಿದೆ. ಗೋಂಡರು ವಾಸಿಸುತ್ತಿದ್ದ ಗುಡ್ಡಗಾಡು ಗೋಂಡ್ವಾನ (ಗೋಂಡರ ವನ) ಅಥವಾ ಗೊಂಡಾರಣ್ಯ ಎನಿಸಿಕೊಂಡಿತು. 14ನೆಯ ಶತಮಾನದಲ್ಲಿ ಗೋಂಡ್ವಾನ ದಟ್ಟವಾದ ಅರಣ್ಯವಾಗಿತ್ತು. ಉತ್ತರದಲ್ಲಿ ವಿಂಧ್ಯ ಪರ್ವತಗಳಿಂದ ದಕ್ಷಿಣದಲ್ಲಿ ಗೋದಾವರಿಯ ವರೆಗೂ ಪೂರ್ವದಲ್ಲಿ ಪೂರ್ವಘಟ್ಟಗಳವರೆಗೂ ವ್ಯಾಪಿಸಿದ್ದ ಪ್ರದೇಶವನ್ನು. 14ನೆಯ ಶತಮಾನದ ಮುಸ್ಲಿಂ ಚರಿತ್ರಕಾರರು ಗೋಂಡ್ವಾನ ಎಂದು ಕರೆದರು. ಅಕ್ಬರ ರಾಜ್ಯದ ಭೂಪಟದಲ್ಲಿ ಅದಕ್ಕೆ ವಿಶಿಷ್ಟ ಸ್ಥಾನವಿದೆ. ಅವನ ಆಸ್ಥಾನಿಕ ಅಬುಲ್ ಫಜಲ ವರ್ಣನೆಯ ಪ್ರಕಾರ ಗೋಂಡ್ವಾನ ಅಥವಾ ಗರ್ಹಾ ಕಟಂಕಾ ಪ್ರದೇಶದ ಎಲ್ಲೆಕಟ್ಟು ಪೂರ್ವಕ್ಕೆ ಛೋಟಾನಾಗಪುರಕ್ಕೆ ಸೇರಿದ ರತ್ನಪುರಿ, ಪಶ್ಚಿಮಕ್ಕೆ ಮಾಳವ, ಉತ್ತರಕ್ಕೆ ಪನ್ನಾ, ದಕ್ಷಿಣಕ್ಕೆ ದಖನ್ ಪ್ರದೇಶ. ಅದರ ವಿಸ್ತೀರ್ಣ ನೈಋತ್ಯದಿಂದ ಈಶಾನ್ಯಕ್ಕೆ 608 ಕಿ.ಮೀ. ಅದರ ಸರಾಸರಿ ಅಗಲ 480 ಕಿ.ಮೀ. 1,15,000 ಚ, ಮೈ. ಪ್ರದೇಶವನ್ನು ಅದು ಒಳಗೊಂಡಿತ್ತು. ಈಗ ಗೋಂಡ್ವಾನದ ಮೇಲ್ನಾಡು ಮತ್ತು ಅರಣ್ಯಗಳು ಇನ್ನೂ ಪರಿಶೋಧನೆಗೆ ಒಳಗಾಗದ ಬಲು ವಿಸ್ತಾರವಾದ ಪ್ರದೇಶವಾಗಿಯೇ ನಮ್ಮ ಭೂಪಟದಲ್ಲಿ ಮರಳ್ಗಾಡಿನ ಊಟೆಯಂತೆ ಅಗೋಚರವಾಗಿವೆ ಎಂದು 1853ರಲ್ಲಿ ರಾಯಲ್ ಏಷ್ಯಾಟಿಕ್ ಸೊಸೈಟಿಗೆ ಒಪ್ಪಿಸಿದ ವರದಿಯಲ್ಲಿ ಹೇಳಲಾಗಿದೆ. ಮಾಳವ, ರತ್ನಪುರಿ, ಜಬ್ಬಲ್ಪುರದ ಬಳಿಯ ತ್ರಿಪುರ (ತೇವಾರ್), ಪಶ್ಚಿಮ ಬಂಗಾಳದ ಪೂರ್ವ ಅಂಚು. ವಾರಂಗಲ್, ಗೋದಾವರಿ ಮತ್ತು ನರ್ಮದಾ ಭಾಗ, ಪೂರ್ವ ಬೀರಾರಿನಲ್ಲಿ ವರ್ಧಾ ನದಿಯ ಬಲದಂಡೆಯ ಪ್ರದೇಶ ಹಾಗೈ ಸತ್ಪುಡಾ ಪರ್ವತಶ್ರೇಣಿ- ಇವು ಗೋಂಡ್ವಾನಕ್ಕೆ ಸೇರಿದ್ದುವು. 

	ಇತಿಹಾಸ : ಮಾಳವದ ರಜಪೂತರು ಈ ಪ್ರದೇಶಕ್ಕೆ ನುಗ್ಗಿ ಇದನ್ನು ಆಕ್ರಮಿಸಿಕೊಂಡು, ಇಲ್ಲಿಯ ಜನರೊಂದಿಗೆ ವಿವಾಹ ಸಂಬಂಧ ಬೆಳೆಸಿದರು. ಹೀಗೆ ಸಂಕರಗೊಂಡ ಗೋಂಡರು ಗೋಂಡ ರಜಪೂತರೆಂಬ ಹೆಸರು ತಾಳಿ ಅಲ್ಲಲ್ಲಿ ರಾಜ್ಯಗಳನ್ನು ಸ್ಥಾಪಿಸಿಕೊಂಡರು. ಗೋಂಡರು ಸ್ಥಾಪಿಸಿಕೊಂಡ ರಾಜ್ಯಗಳಲ್ಲಿ ಪ್ರಮುಖವಾದವು ನಾಲ್ಕು. ಅವು ಮೊಗಲ್ ಸಾಮ್ರಾಜ್ಯ ಸ್ಥಾಪನೆಯಾಗುವುದಕ್ಕೆ ಹಿಂದೆ ಪ್ರಬಲವಾಗಿದ್ದುವು. ಅವುಗಳಲ್ಲಿ ಒಂದು ಗರ್ಹಾ. ಈ ರಾಜ್ಯದ ಅರಸರು ನರ್ಮದಾ ಕಣಿವೆಯಲ್ಲಿ ಆಳುತ್ತಿದ್ದರು. ಮಾಂಡ್ಲ ರಾಜ್ಯವನ್ನು ಸ್ಥಾಪಿಸಿದವನು ಯದುರಾಯ. ತನ್ನ ಮಾವ, ಗರ್ಹಾ ರಾಜ್ಯದ ಅರಸ ನಾಗದೇವನ ತರುವಾಯ ಇವನೇ ಗರ್ಹಾ ರಾಜನಾದ (358). ಇವನ ವಂಶಜರಲ್ಲಿ ಒಬ್ಬನಾದ ಗೋಪಾಲ 634ರಲ್ಲಿ ಮಾಂಡ್ಲ ರಾಜ್ಯವನ್ನು ಗೆದ್ದುಕೊಂಡ. ಸಂಗ್ರಾಮ 1480-1530ರಲ್ಲಿ ಗರ್ಹಾ ರಾಜ್ಯವನ್ನಾಳಿದ. 1563ರಲ್ಲಿ ಅಕ್ಬರನ ಸೈನ್ಯ ಅಸಫ್ ಖಾನನ ನಾಯಕತ್ವದಲ್ಲಿ ಗರ್ಹಾ ರಾಜ್ಯದ ಮೇಲೆ ದಾಳಿ ನಡೆಸಿದಾಗ ಅಲ್ಲಿಯ ಅರಸ ಬೀರ್ ನಾರಾಯಣ ಇನ್ನೂ ಹುಡುಗನಾಗಿದ್ದ. ಅವನ ತಾಯಿ ರಾಣಿ ದುರ್ಗಾವತಿ ಅಕ್ಬರನ ಸೈನ್ಯವನ್ನು ಎದುರಿಸಿ ಯುದ್ಧಮಾಡಿ ಮಡಿದಳು. 1742ರಲ್ಲಿ ಬಾಲಾಜಿ ಬಾಜಿರಾಯ ಆ ದೇಶದ ಮೇಲೆ ದಂಡೆತ್ತಿಹೊಂದ. ಗೋಂಡರ ಎರಡನೆಯ ರಾಜ್ಯದ ರಾಜಧಾನಿ ಸತ್ಪುಡಾ ಪರ್ವತಶ್ರೇಣಿಗಳ ದೇವಘಡ (ದೇವಘರ್). ಈ ರಾಜ್ಯದ ಅರಸರಲ್ಲಿ ಒಬ್ಬನಾದ ಭಕ್ಸ್ ಬಾಲಂದ್ ಔರಂಗ್eóÉೀಬನಿಂದ ಬಂಧಿತನಾದ. ಗೋಂಡರ ಮೂರನೆಯ ರಾಜ್ಯ ಬೈಟುಲ್ ಪ್ರದೇಶದಲ್ಲಿತ್ತು. ಖೆರ್ಲಾ ಅದರ ರಾಜಧಾನಿ. ಪ್ರಸಿದ್ಧ ದುರ್ಗಗಳಾದ ಗ್ವಾಲಿಘರ್ ಮತ್ತು ನರ್ನಲ್ಲ ಈ ರಾಜ್ಯಕ್ಕೆ ಸೇರಿದ್ದುವು. ಇದರ ಅರಸ ನರಸಿಂಗರಾಜ ಮಾಳವದ ಅರಸ ಉಷಾಂಗ್ ಘೋರಿಯಿಂದ ಸೋತು ಮಡಿದ. ಖೆರ್ಲಾ ನಗರ ಮಾಳವದ ವಶವಾದ ಸ್ವಲ್ಪ ಕಾಲಾನಂತರ ದೇವಘಡದ ಅರಸರಿಗೆ ಸೇರಿಹೋಯಿತು. ಗೋಂಡರ ನಾಲ್ಕನೆಯ ರಾಜ್ಯದ ರಾಜಧಾನಿ ಚಾಂದ, ವರ್ಧಾ ನದಿಯ ದಂಡೆಯ ಮೇಲೆ ಸ್ಥಾಪಿತವಾಗಿ ಪೂರ್ವ ಹಾಗೂ ಆಗ್ನೇಯಕ್ಕೆ ವ್ಯಾಪಿಸಿತು. ಔರಂಗ್eóÉೀಬನ ಕಾಲದಲ್ಲಿ ಖೆರ್ಲಾಕ್ಕೆ ಅನತಿದೂರದ ಸೋಲಿಘಡದಲ್ಲಿ ಗೋಂಡ ರಾಜರು ಆಳುತ್ತಿದ್ದರು. ಈ ರಾಜ್ಯ 1700-1775ರ ನಡುವೆ ಮರಾಠರ ವಶವಾಯಿತು. 

	ಈ ಪ್ರಮುಖ ಗೋಂಡ ರಾಜ್ಯಗಳಲ್ಲದೆ ಗೋಂಡ ರಜಪೂತ ಅರಸರು ವಾರಂಗಲ್ಲಿನಲ್ಲಿ ಆಳುತ್ತಿದ್ದರು. 1309ರಲ್ಲಿ ಮಲ್ಲಿಕ್- ಕಾಫುರ್ ವಾರಂಗಲ್ಲನ್ನು ಸೂರೆ ಮಾಡಿದ. 1323ರಲ್ಲಿ ಅದು ಘಿಯಾಸುದ್ದೀನನ ಮಗ ಜೌನಾಖಾನನ (ತುಘಲಖ್) ವಶವಾಯಿತು. ಅದರ ಅರಸ ಪ್ರತಾಪರುದ್ರ ಯುದ್ಧದಲ್ಲಿ ಮಡಿದ. 15ನೆಯ ಶತಮಾನದಲ್ಲಿ ಗುಲ್ಬರ್ಗದ ಅರಸ ಅಹಮದ್ ಷಾ ವಾಲಿ ವಾರಂಗಲ್ಲನ್ನು ವಶಮಾಡಿಕೊಂಡು ಅಲ್ಲಿಯ ಅರಸನನ್ನು ಗೋದಾವರಿಯ ಉತ್ತರಕ್ಕೆ ಅಟ್ಟಿದ್ದ. 

	1513ರಲ್ಲಿ ಗೋಂಡ ರಾಜರು ಒಗ್ಗೂಡಿ ಮಾಖವದ ಮೇದನಿರಾಯನ ಪರವಾಗಿ ನಿಂತು ಮಾಳವದ 2ನೆಯ ಮಹಮದನ ವಿರುದ್ಧ ಹೋರಾಡಿದರು. 16ನೆಯ ಶತಮಾನದ ಕೊನೆಯ ಹೊತ್ತಿಗೆ ಅಕ್ಬರ್ ಗೋಂಡ್ವಾನದ ಪಶ್ಚಿಮ ಭಾಗವನ್ನು ಪೂರ್ಣವಾಗಿ ಸ್ವಾಧೀನಪಡಿಸಿಕೊಂಡ. ಮರಾಠರು ಏಳಿಗೆಗೆ ಬಂದ ಕಾಲದಲ್ಲಿ ಗೂೀಂಡರ ಪ್ರಭುತ್ವಕ್ಕೆ ಪೆಟ್ಟು ತಾಕಿತು; 1738ರಲ್ಲಿ ರಘೂಜಿ ಭೋನ್‍ಸ್ಲಾ ದೇವಘಡದ ಉತ್ತರಾಧಿಕಾರದ ಬಗ್ಗೆ ಕೈ ಹಾಕಿ ಆ ರಾಜ್ಯದ ಹುಟ್ಟುವಳಿಯಲ್ಲಿ ಳಿ ಭಾಗವನ್ನು ವಶಪಡಿಸಿಕೊಂಡ. ಆದರೆ, 1743ರಲ್ಲಿ ಗೋಂಡರು ದಂಗೆಯೇಳಲು ರಘೂಜಿ ಭೋನ್‍ಸ್ಲಾ ಅದನ್ನು ಅಡಗಿಸಿ ದೇವಘಡ ಮತ್ತು ಚಾಂದ್ ರಾಜ್ಯಗಳನ್ನು ಗೆದ್ದುಕೊಂಡ. ಮರಾಠರು 1751-52ರಲ್ಲಿ ಗ್ವಾಲಿಘರ್, ನರ್ನಲ್ಲ ಮತ್ತು ಮಾಣಿಕ ದುರ್ಗಗಳನ್ನು ಗೆದ್ದುಕೊಂಡರು. ಹೀಗೆ 18ನೆಯ ಶತಮಾನದಲ್ಲಿ ಗೋಂಡ್ವಾನದ ಬಹುಭಾಗ ನಾಗಪುರದ ಭೋನ್‍ಸ್ಲಾ ಅರಸರಿಗೆ ಸೇರಿಹೋಗಿ ಕೆಲವು ಜಿಲ್ಲೆಗಳು ಹೈದರಾಬಾದಿನ ನಿಜಾಮನಿಗೆ ಸೇರಿದುವು. ಆ ತರುವಾಯ ಮರಾಠರು ಬಹು ಸಂಖ್ಯೆಯಲ್ಲಿ ಈ ಪ್ರದೇಶಗಳಲ್ಲಿ ನೆಲೆಸಿ ಗೋಂಡರನ್ನು ಪರ್ವತಗಳತ್ತ ಅಟ್ಟುತ್ತ ಬಂದರು. ಈಗ ಗೋಂಡರು ಹೆಚ್ಚಾಗಿ ಸತ್ಪುಡಾ ಬೆಟ್ಟಗಳು, ಮಾಂಡ್ಲ ಪ್ರದೇಶದ ಅರಣ್ಯಭಾಗ, ಜಬ್ಬಲ್‍ಪುರ, ಸಿಯೋನುಮ ಚಾಂದ್‍ವಾರ, ಬೈಟುಲ್, ಹೊಷುಂಗಾಬಾದ್, ಅಸಿರ್‍ಘರ್ ಹಾಗೂ ಒರಿಸ್ಸದ ಭಾಗಗಳಲ್ಲಿ ನೆಲೆಸಿದ್ದಾರೆ. ಬೀರಾರಿನ ಗೋಂಡರು ಆಮ್ ರೋಟಿ ಮೊದಲಾದ ಕಡೆ ಹರಡಿದ್ದಾರೆ. 1818 ಮತ್ತು 1853ರ ನಡುವೆ ಗೋಂಡ್ವಾನ ಬ್ರಿಟಿಷರ ಆಳ್ವಿಕೆಗೆ ಸೇರಿಹೋಗಿ ಚತ್ತೀಸಘಡದ ಕೆಲವು ಸಂಸ್ಥಾನಗಳಲ್ಲಿ ಮಾತ್ರ 1947ರ ವರೆಗೆ ಸಣ್ಣ ಪುಟ್ಟ ಅರಸರ ಆಳಿಕೆ ಮುಂದುವರಿಯಿತು. ಭಾರತದ ರಾಜ್ಯಗಳ ಪುನರ್ವಿಂಗಡಣೆಯ ಕಾಲದಲ್ಲಿ ಗೋಂಡ್ವಾನ ವಿಭಜಿಸಲ್ಪಟ್ಟು ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶಗಳಲ್ಲಿ ಸೇರಿತು.
(ಪಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ